Blogs

ayushadmin | Nov 23, 2020 | 429

ಕಿಡ್ನಿಯ ಕಲ್ಲು: ಏನೇನಿದೆ ಮದ್ದು..?

ಚಳಿಗಾಲ ಮುಗಿದು ಬೇಸಿಗೆಕಾಲ ಆರಂಭವಾಗಿದೆ, ಇನ್ನೂ ಬೇಸಿಗೆಯ ಆರಂಭದ ದಿನಗಳಲ್ಲೇ ಸೂರ್ಯನ ಪ್ರಖರ ಬಿಸಿಲಿನಿಂದಾಗಿ ಜನ ಕಂಗೆಟ್ಟುಹೋಗಿದ್ದಾರೆ. ಬೆವರು ಧಾರೆಯಾಗಿ ಇಳಿದ ಹಾಗೆ ಜನ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ಸುಲಭವಾಗಿ ತುತ್ತಾಗುವ ಸಮಸ್ಯೆ ಕಿಡ್ನಿಯ ಕಲ್ಲು.

ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಕಿಡ್ನಿಯ ಕಲ್ಲಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಕಳವಳ ವ್ಯಕ್ತಪಡಿಸಿದೆ. ದೇಹದ ಪ್ರಮುಖ ಅಂಗವಾಗಿರುವ ಕಿಡ್ನಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಹಾಗೂ ಆಹಾರ ಶೈಲಿಯಿಂದ ಜನರು ಕಿಡ್ನಿಯ ಕಲ್ಲಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಮೂತ್ರದಲ್ಲಿನ ಖನಿಜಾಂಶಗಳು ಮತ್ತು ನೀರಿನಂಶ ಕಡಿಮೆಯಾಗಿ ದೇಹದಲ್ಲಿ ಕಾಣಿಸಿಕೊಳ್ಳುವ ಶುಷ್ಕತೆ ಕಿಡ್ನಿಯ ಕಲ್ಲಿಗೆ ಕಾರಣ. ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಖನಿಜಾಂಶ ಹೆಚ್ಚಾಗಿ ಅವುಗಳು ಹರಳಿನ ರೂಪದಲ್ಲಿ ಶೇಖರಣೆಗೊಂಡು ಕಲ್ಲಾಗಿ ಪರಿವರ್ತನೆಯಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚು ಬೆವರಿ ನೀರಿನಂಶ ಕಡಿಮೆಯಾಗಿ ಖನಿಜಾಂಶ ಹೆಚ್ಚಾಗಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು

ಪಕ್ಕೆ ಅಥವಾ ಪಾಶ್ರ್ವ ಭಾಗದಲ್ಲಿ ಕಾಣಿಸಿಕೊಂಡ ನೋವು ತೊಡೆಯ ಸಂಧಿಯವರೆಗೂ ಕಾಣಿಸಿಕೊಳ್ಳಬಹುದು. ರಕ್ತಮಿಶ್ರಿತ ಕೆಂಪು ಬಣ್ಣದ ಮೂತ್ರ ವಿಸರ್ಜನೆ, ವಾಂತಿ, ವಾಕರಿಕೆ, ಮೂತ್ರವಿಸರ್ಜನೆ ಮಾಡುವಾಗ ನೋವು, ಜ್ವರ ಕೂಡಾ ಕಾಣಿಸಿಕೊಳ್ಳಬಹುದು

 

ಕಾರಣಗಳು

ಅತಿಯಾದ ಕಾಫಿ ಟೀ ಸೇವನೆ
ಅತೀ ಹೆಚ್ಚು ಪ್ರೋಟಿನ್ ಸೇವನೆ
ಕ್ಯಾಲ್ಸಿಯಂ ಇರುವ ಪದಾರ್ಥಗಳ ಹೆಚ್ಚು ಸೇವನೆ. ಉದಾ: ಹಾಲು, ಪನೀರ್, ಚೀಸ್ ಇತ್ಯಾದಿ
ಸಂಸ್ಕರಿತ ಆಹಾರ ಪದಾರ್ಥಗಳ ಸೇವನೆ
ಕ್ಯಾಲ್ಸಿಯಂ ಮಾತ್ರೆ, ವಿಟಮಿನ್ ಡಿ, ವಿಟಮಿನ್ ಸಿ ಮಾತ್ರೆಗಳ ಸೇವನೆ
ಹೈಪರ್‍ಪ್ಯಾರಾಥೈರಾಯ್ಡ್ ಸಮಸ್ಯೆ, ಕರುಳಿನ ಹುಣ್ಣಿನಿಂದಲೂ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳಬಹುದು

ಕಿಡ್ನಿಯ ಕಲ್ಲನ್ನು ನಿವಾರಿಸುವುದು ಹೇಗೆ?
ಕಲ್ಲನ್ನು ಕರಗಿಸಿ ಹರಳಾಗಿಸಿ ಹೊರಹಾಕುವಂತಹ ಅನೇಕ ಆಯುರ್ವೇದ ಔಷಧಿಗಳಿದೆ. ತಜ್ಞರ ಸಲಹೆಯಂತೆ ತೆಗೆದುಕೊಳ್ಳಬೇಕು.
ದಿನಕ್ಕೆ ಮೂರು ಲೀಟರ್‍ನಷ್ಟು ನೀರು ಕುಡಿಯಬೇಕು
ನಿಂಬೆಹಣ್ಣು, ಮೂಸಂಬಿ, ಕಿತ್ತಳೆ ಮುಂತಾದ ಸಿಟ್ರಿಕ್ ಅಂಶವಿರುವ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು
ಮಾಂಸಾಹಾರ ಸೇವನೆ ಮಿತವಾಗಿರಲಿ
ಕಾಫಿ, ಟೀ, ಗ್ರೀನ್ ಟೀ, ಕೆಫಿನ್‍ಯುಕ್ತ ತಂಪು ಪಾನೀಯಗಳನ್ನು ಕುಡಿಯಬೇಡಿ
ಎಳನೀರು, ಅನನಾಸು, ಕಲ್ಲಂಗಡಿ, ಬಾಳೆಹಣ್ಣು, ಕರ್ಬೂಜ, ಒಣದ್ರಾಕ್ಷಿಯನ್ನು ಯಥೇಚ್ಛವಾಗಿ ಸೇವಿಸಿ


ಬಾಳೆದಿಂಡಿನ ರಸ ಅಥವಾ ಬಾಳೆದಿಂಡಿನ ಪಲ್ಯ, ಪಚಡಿ ಮಾಡಿ ತಿನ್ನಬಹುದು
ಬಾರ್ಲಿ ನೀರು, ಬೇಯಿಸಿದ ಹುರುಳಿಕಾಳಿನ ನೀರು ಕುಡಿಯುವುದು ತುಂಬಾ ಉತ್ತಮ

ಕಿಡ್ನಿಯ ಕಲ್ಲನ್ನು ನಿವಾರಿಸುವುದರ ಜೊತೆಗೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯ, ಬೇಸಿಗೆಯ ದಣಿವು ಅತಿಯಾಗದಂತೆ, ಕಿಡ್ನಿಯ ಕಲ್ಲು ಬಾರದಂತೆ ಬೇಸಿಗೆಯಲ್ಲಿ ಹೆಚ್ಚು ದ್ರವಾಹಾರಗಳನ್ನು ಸೇವಿಸುವುದು ಸೂಕ್ತ.

Ayush TV

Ayush Tv- World's First Health, Wellness, Lifestyle and Infotainment Channel