Blogs

Ayush admin | Jan 15, 2021 | 365

ಮಹಿಳಾ ಸಮಾನತೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಆದಿಯ ಮೂಲ ಹೆಣ್ಣು. ಭಾರತೀಯ ಸಂಸ್ಕ್ರತಿಯಲ್ಲಿ ಹೆಣ್ಣಿಗೊಂದು ವಿಶೇಷವಾದ ಸ್ಥಾನಮಾನವಿರುವುದು ನಿಮಗೆಲ್ಲಾ ಗೊತ್ತಿರುವ ವಿಷಯ ಅಂತಾನೇ ಹೇಳಬಹುದು. ನಾವು ಹೆಣ್ಣಿಗೆ ಗೌರವ ಸೂಚಿಸುತ್ತಾ ಬಂದಿರುವುದು ಹೊಸದೇನಲ್ಲ ಇದು ಅನಾದಿಕಾಲದಿಂದಲೂ ಕೂಡ ಆಚರಿಸಿಕೊಂಡು ಬಂದ ಒಂದು ರೀತಿಯ ಆಚರಣೆ ಎಂದರೂ ತಪ್ಪಾಗಲಾರದು. ಸ್ತ್ರೀ ಅಥವಾ ಮಹಿಳೆ ಎನ್ನುವ ಪದವು ಸಂಸ್ಕ್ರತದ ಮೂಲವಾದರೂ ಹೆಣ್ಣು ಎನ್ನುವ ಪದ ಕನ್ನಡದ್ದಾಗಿದೆ.

ಕಣ್ಣಿಗೆ ಕಾಣುವ ದೇವರು ಎಂದರೆ ತಾಯೀ ತಾನೇ ಎನ್ನುವ ಹಾಡು ನೀವೆಲ್ಲಾ ಕೇಳಿರಬಹುದು. ಹೌದು ತಾಯಿ ಅಥವಾ ಹೆಣ್ಣನ್ನು ಭಾರತೀಯ ಸಂಸ್ಕ್ರತಿಯಲ್ಲಿ ದೇವರಿಗೆ ಹೋಲಿಸುತ್ತಾರೆ ಏಕೆಂದರೆ ನಾವು ಕಣ್ಣಿಗೆ ಕಾಣದ ದೇವರನ್ನ ಹೇಗೆ ಸೃಷ್ಟಿಕರ್ತ ಎಂದು ನಂಬುತ್ತೇವೋ ಹಾಗೇ ತಾಯಿ ಅಥವಾ ಹೆಣ್ಣು ಕೂಡ ಸೃಷ್ಟಿಕರ್ತೆ. ಒಡಲೊಳಗಡೆ ಪ್ರಪಂಚಕ್ಕೆ ಕೂಗಿ ಹೇಳುವಷ್ಟು ನೋವಿದ್ದರೂ ಅವುಗಳೆಲ್ಲವನ್ನ ತನ್ನಲ್ಲೇ ಮರೆಮಾಚಿ ಆಕೆ ಹೊಸ ಜೀವದ ಸೃಷ್ಟಿಗೆ ಕಾರಣೀಭೂತಳಾಗುತ್ತಾಳೆ.

ಆಕೆಯನ್ನ ಎಷ್ಟೇ ಹೊಗಳಿದರು ಪದಗಳಿಗೆ ಅಂತ್ಯವೇ ಇಲ್ಲ. ಹುಟ್ಟಿನಿಂದ ಮಣ್ಣಿನಲ್ಲಿ ಮಣ್ಣಾಗುವವರೆಗೂ ಆಕೆ ತನ್ನವರಿಗಾಗಿ, ಅವರ ಸುಖ ಸಂತೋಷಕ್ಕಾಗಿ ಹಗಲಿರುಳು ದುಡಿಯುತ್ತಾಳೆ. ಸ್ತ್ರೀ ಎಂದರೆ ಆಕೆ ಅವಿನಾಶಿ, ಆಕೆ ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ, ಸಹನೆ, ಭೂಮಿತೂಕದ ತಾಳ್ಮೆಯ ಶಕ್ತಿಗಳ ಸಮಾಗಮವೇ ಹೆಣ್ಣು. ವೇದಗಳ ಕಾಲದಿಂದಲೂ ಹೆಣ್ಣು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಬೌದ್ಧಿಕವಾಗಿ ಸಾಧನೆಯನ್ನ ಗೇಯುತ್ತಾ ಬಂದಿದ್ದಾಳೆ.

ನಾವು ಪುರಾಣವನ್ನ ಒಮ್ಮೆ ತಿರುಗಿ ನೋಡಿದರೆ ಹೆಣ್ಣಾದ ಆದಿಶಕ್ತಿಯು ದುಷ್ಟಶಿಕ್ಷಕಿಯಾಗಿ, ಶಿಷ್ಟರಕ್ಷಕಿಯಾಗಿ ತನ್ನ ಸರ್ವಶಕ್ತಿಯನ್ನ ಮೆರೆದಿರುವುದನ್ನ ಕಾಣಬಹುದು. ಶಾಸ್ತ್ರಗಳನ್ನ ನೋಡುವುದಾದರೆ ಹೆಣ್ಣನ್ನು ಜಗಜನನಿಯೆಂದು ಪೂಜಿಸಲಾಗುತ್ತದೆ. ಕಾರ್ಯೇಷು ದಾಸಿ, ಸಲಹೇಷು ಮಂತ್ರಿ, ಭೋಜೇಷು ಮಾತಾ, ಶಯನೇಷು ರಂಭಾ, ನಾರಿ ಕ್ಷಮಯಾಧರಿತ್ರಿ ಎಂದು ಶಾಸ್ತ್ರಗಳಲ್ಲಿ ನಾರಿಯನ್ನ ಎಷ್ಟು ವರ್ಣಮಯವಾಗಿ ಬಣ್ಣಿಸಲಾಗಿದೆ ಅಲ್ವಾ..? ಇದರ ಅರ್ಥ ಇಷ್ಟೇ ಸ್ನೇಹಿತರೇ..ನಿಸ್ವಾರ್ಥಿಯಾದ ನಾರಿಯು ಹಗಲಿರುಳೆನ್ನದೆ ದಾಸಿಯಂತೇ ಕೆಲಸವನ್ನ ಮಾಡುತ್ತಾಳೆ.

ಸಂಸಾರ ಎನ್ನುವ ನೌಕೆ ಕಷ್ಟದಲ್ಲಿದ್ದಾಗ ಮಂತ್ರಿಯಂತೆ ಸಲಹೆಯನ್ನ ನೀಡಿ ಕಷ್ಟಕ್ಕೆ ಮುಕ್ತಿಯ ಹಾದಿಯನ್ನ ತೋರುತ್ತಾಳೆ, ಗಂಡು ಹೆಣ್ಣೆನ್ನುವ ಭೇದ ಭಾವ ತೋರದೆ ಸಂಸಾರವನ್ನ ತಾಯಿಯಂತೆ ಪೋಷಿಸುತ್ತಾಳೆ, ಇವೆಲ್ಲದರ ಜೊತೆಗೆ ಕತ್ತಲಾಯಿತೆಂದರೆ ವೇಶ್ಯೆಯಂತೆ ತನ್ನೆಲ್ಲಾ ಸುಖವನ್ನ ಮರೆತು ತನ್ನವರ ಸುಖಕ್ಕಾಗಿ ಸೆರಗ ಹಾಸುವಳು ಹೆಣ್ಣು. ಇನ್ನೊಬ್ಬರಿಗಾಗಿ ಇಷ್ಟೆಲ್ಲಾ ಕಷ್ಟ ಪಡುವ ಹೆಣ್ಣನ್ನ ಕ್ಷಮೆಯ ದೇವತೆ ಎನ್ನದೇ ಇನ್ನೇನು ಹೇಳಲು ಸಾಧ್ಯವಲ್ಲವೇ..

ಮನುವು ತನ್ನ ಮನುಸ್ಮøತಿಯಲ್ಲಿ ಹೆಣ್ಣಿನ ಕುರಿತು ಯತ್ರನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾ: ಎಂದು ಹೇಳಿದ್ದಾನೆ. ಇದರ ಅರ್ಥ ಎಲ್ಲಿ ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೋ ಅಲ್ಲಿ ಸಾಕ್ಷಾತ್ ದೇವರು ನೆಲೆಸಿರುತ್ತಾರೆ ಎಂದರ್ಥ. ಹೆಣ್ಣು ದೇವರ ಪ್ರತಿರೂಪ. ದೇವರನ್ನ ಹೇಗೆ ಪೂಜನೀಯ ಭಾವದಿಂದ ನೋಡುತ್ತೇವೋ ಹಾಗೇ ಹೆಣ್ಣನ್ನು ಕೂಡ ಪೂಜಿಸಬೇಕು ಎಂದು ಮನುವು ಹೇಳುತ್ತಾನೆ.
ನಮ್ಮ ಪರಂಪರೆಯಿಂದಲೂ ನಾವು ಮುಖ್ಯವಾಗಿ ಪೂಜಿಸುತ್ತಾ ಬಂದಿರುವುದು ಗಂಡು ದೇವರುಗಳಿಗಿಂತಲೂ ಸ್ತ್ರೀ ದೇವತೆಯರನ್ನೇ.

ಶಕ್ತಿಯ ಅದಿದೇವತೆಯಾಗಿ ಪಾರ್ವತಿಯನ್ನ ಪೂಜಿಸಿದರೆ, ಧನಕ್ಕೆ ಅದಿದೇವತೆಯೆಂದು ಲಕ್ಷ್ಮಿಯನ್ನ ಪೂಜಿಸುತ್ತಿದ್ದೇವೆ. ಆರಾಧನೆಯನ್ನ ಹೊರತು ಪಡಿಸಿ ನಮ್ಮ ದೇಶದಲ್ಲಿನ ನದಿಯನ್ನು ಪರಿಗಣಿಸಿದರೆ ಒಂದು ನದಿಯ ಹೆಸರನ್ನ ಬಿಟ್ಟು ಉಳಿದೆಲ್ಲಾ ನದಿಗಳು ಸ್ತ್ರೀ ಹೆಸರಿನಲ್ಲಿರುವ ನದಿಗಳೇ. ಒಂದೆಡೆ ನಮ್ಮ ಖ್ಯಾತ ಕವಿ ಜಿ.ಎಸ್ ಶಿವರದ್ರಪ್ಪನವರು ತಮ್ಮ ಕವನದಲ್ಲಿ ಹೆಣ್ಣಿನ ಕುರಿತು ಎಷ್ಟು ಅರ್ಥ ಪೂರ್ಣವಾಗಿ ವರ್ಣಿಸಿದ್ದಾರೆ ಎಂದು ನೀವೇ ಒಮ್ಮೆ ನೋಡಿ..
ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿಬೆಳಕನಿಟ್ಟು ತೂಗಿದಾಕೆನಿನಗೆ ಬೇರೆ ಹೆಸರು ಬೇಕೇ..?ಸ್ತ್ರೀ ಎಂದರೆ ಅಷ್ಟೇ ಸಾಕೇ..?

ಇನ್ನೂ ನಾವು ಆಧುನಿಕ ಯುಗವನ್ನು ತೆಗೆದುಕೊಂಡರೆ ಹೆಣ್ಣಿನ ಬಗ್ಗೆ ಮಾತಾಡಬೇಕೇ ಬೇಡವೇ ಎನ್ನುವ ಸಂಶಯ ನನ್ನನ್ನು ಕಾಡುತ್ತಿದೆ. ಮಹಿಳೆಯರೇ ಮುಂದೆ ಬನ್ನಿ, ಮಹಿಳೆಯರೇ ಮುಂದೆ ಬನ್ನಿ ಎಂದು ಬೊಬ್ಬಿರುದು ಬೀಗುತ್ತಿರುವ ನಮ್ಮ ಸಮಾಜ ಸಮಾನತೆಯ ವಿಷಯದಲ್ಲಿ ಎಷ್ಟು ಮೋಸ ಮಾಡುತ್ತಿದೆ ಎನ್ನುವುದು ನಮಗೆಲ್ಲಾ ಗೊತ್ತಿದೆ. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮೊದಲನೇ ಪ್ರಾಶಸ್ತ್ಯ ಯಾವತ್ತಿದ್ದರು ಪುರುಷರದ್ದೇ. ಹೆಣ್ಣು ಅಸಮಾನತೆಗೆ ಒಳಪಟ್ಟಿದ್ದು ಹೊಸ ವಿಷಯವೇನಲ್ಲ ಇದು ಗುಪ್ತರ ಆಳ್ವಿಕೆಯ ಕಾಲದಿಂದಲೂ ನಡೆದು ಬಂದಿದೆ.

ಸತಿ ಪದ್ಧತಿ, ಪರದಾ ಪದ್ಧತಿ, ಬಹುಪತ್ನಿತ್ವ, ಬಾಲ್ಯ ವಿವಾಹ, ವರದಕ್ಷಿಣೆ ಇಂತಹ ಸಮಾಜಿಕ ಪಿಡುಗಗಳನ್ನ ಸಮಾಜದ ಮುಖ್ಯ ವಾಹಿನಿಯಿಂದ ತೆಗೆದು ಹಾಕಲಾಗಿದೆಯೆಂದರೂ ಎಲ್ಲೋ ಕೆಲವೆಡೆ ನಾವಿವುಗಳನ್ನು ಗುರುತಿಸಬಹುದು. ಯಾವಾಗ ಮಹಿಳೆಯರಿಗೂ ಶಿಕ್ಷಣ ನೀಡಲು ಆರಂಭವಾಯಿತೋ ಅಂದಿನಿಂದ ಇವುಗಳ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು. ಆದರೆ ಇಂದು ಬಹುಪತ್ನಿತ್ವ, ವರದಕ್ಷಿಣೆ, ಸ್ತ್ರೀ ಭ್ರೂಣ ಹತ್ಯೆ, ಬಾಲ್ಯವಿವಾಹಗಳು ಹೊಸ ರೂಪವನ್ನೇ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಇವೆಲ್ಲವುಗಳಿಗೆ ಕಿರೀಟ ಎಂಬಂತೆ ಅತ್ಯಾಚಾರಗಳು ಹೆಡೆಯೆತ್ತಿ ನಿಂತವು. ವಯಸ್ಸಿನ ವ್ಯತ್ಯಾಸವಿಲ್ಲದೇ ಪುಟ್ಟ ಮಕ್ಕಳ ಮೇಲೂ ಅತ್ಯಾಚಾರವಾಗುತ್ತಿದೆ. ಎಷ್ಟೇ ಕಾನೂನಿನ ಕಟ್ಟಲೆಗಳಿದ್ದರೂ ಅದನ್ನು ಮೀರಿ ನಿಂತಿದೆ ಈ ಅತ್ಯಾಚಾರ ಸಮಸ್ಯೆ.

ಅಕ್ಷರ ಕಲಿತ ನಾರಿ ದೇಶದ ಪ್ರಗತಿಗೆ ದಾರಿ ಎಂದು ಹೇಳುವ ನಾವು ಅಕ್ಷರ ಕಲಿಯಲು ಶಾಲೆಗೆ ಹೋದ ನಾರಿ ಪುನಃ ಮನೆಗೆ ಬರಲು ಅವಕಾಶ ಕೊಟ್ಟರೇ ತಾನೇ ಆಕೆ ಪ್ರಗತಿಗೆ ದಾರಿಯಾಗುವುದು. ದೇಶದ ಪ್ರಗತಿಗೆ ಮುನ್ನುಡಿ ಬರೆಯಲು ಹೊರಟ ಹೆಣ್ಣು ದಾರಿಯಲ್ಲೇ ಕಾಮಾಂಧರಿಂದ ದೌರ್ಜನ್ಯಕ್ಕೆ ಬಳಗಾಗುತ್ತಿರುವುದನ್ನ ಪ್ರತಿನಿತ್ಯ ನಾವು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಈ ಎಲ್ಲಾ ಸಾಮಾಜಿಕ, ಆರ್ಥಿಕ, ಬೌದ್ಧಿಕ ಸಮಸ್ಯೆಗಳ ಮಧ್ಯೆಯು ಸಾಧನೆ ಮಾಡಿರುವ ಬಹಳಷ್ಟು ಮಹಿಳೆಯರನ್ನ ನಾವು ನೋಡಬಹುದು.

ಕೇವಲ ಕಲೆ, ಸಂಗೀತ, ಚಲನಚಿತ್ರ, ರಂಗಭೂಮಿ ಹಾಗೂ ಸಾಂಸ್ಕ್ರತಿಕ ರಂಗಗಳಲ್ಲಿ ಮಾತ್ರವಲ್ಲದೇ ರಾಷ್ಟ್ರಪತಿ, ಪ್ರಧಾನಿಯಂತಹ ಪ್ರಮುಖ ಹುದ್ದೆಗಳಲ್ಲೂ ಮಹಿಳೆಯರನ್ನ ನೋಡಬಹುದು. ಉದಾಹರಣೆಗೆ ನೋಡುವುದಾದರೆ ಸರೋಜಿನಿ ನಾಯ್ಡು, ಕಲ್ಪನಾ ಚಾವ್ಲಾ, ಸುನೀತಾ ವಿಲಿಯ್ಸ್‍ಂ, ಮದರ್ ಥೆರೆಸಾ, ಕಿರಣ್ ಬೇಡಿ ಹಾಗೂ ಇಂದಿರಾ ಗಾಂಧಿ ಹೀಗೇ ಮುಂತಾದ ಸಾಧಕರ ನೆನಪುಗಳು ನಮ್ಮ ಮನಸ್ಸಿನಲ್ಲಿ ಅಜರಾಮರ.

ಈ ಎಲ್ಲಾ ಸಾಮಜಿಕ ದೌರ್ಜನ್ಯವನ್ನು ಮೆಟ್ಟಿ ನಿಂತು ಸಮಾಜದಲ್ಲಿ ಮಹಿಳೆಯರ ಸ್ಥಾನ ಮಾನವನ್ನ ವೃದ್ಧಿಸುವ ದ್ರಷ್ಟಿಯಿಂದ ಹುಟ್ಟಿಕೊಂಡಿರುವ ಕಲ್ಪನೆಯೇ ಮಾರ್ಚ್ 8 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ ನಿರ್ವಹಿಸುವ ಪಾತ್ರಗಳು ಹಲವು. ಹೆಣ್ಣಿನ ಈ ಸಹನಾಭೂತಿ ಮನೋಭಾವವನ್ನು ಅರಿತು ಈ ಮಾರ್ಚ್ 8ರಿಂದಾದರೂ ಆಕೆಯನ್ನೂ ಕೂಡ ಸಮಾಜದಲ್ಲಿ ಸಮನಾಗಿ ಗೌರವಿಸಲಿ ಎಂಬೂದೇ ನಮ್ಮ ಆಶಯ. ಸಮಾಜದ ಸಮಸ್ತ ಜನತೆಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

Ayush TV

Ayush Tv- World's First Health, Wellness, Lifestyle and Infotainment Channel