Blogs

Ayush admin | Jan 15, 2021 | 451

ಆರೋಗ್ಯಕರ ಜೀವನ ಶೈಲಿಗೆ ಸೂರ್ಯನಮಸ್ಕಾರದ ೧೨ ಸೂತ್ರಗಳು

ಜೀವ, ಜೀವನ, ಆರೋಗ್ಯ ದೇವರು ಕೊಟ್ಟ ಪ್ರಸಾದವಾಗಿರಬಹುದು, ಆದರೆ ಉತ್ತಮವಾದ ಜೀವನವನ್ನು ರೂಪಿಸಿಕೊಂಡು ಜೀವನದಲ್ಲಿ ಸಾಧನೆಯನ್ನ ಗೇಯಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಈ ಜೀವ ಆರೋಗ್ಯಕರವಾಗಿದ್ದರೆ ಮಾತ್ರ ಜೀವನದಲ್ಲಿ ಏನನ್ನಾದರು ಸಾಧಿಸಲು ಸಾಧ್ಯ. ಆದರೆ ನಮ್ಮದು ಆಧುನಿಕ ಜೀವನ ಶೈಲಿ, ಎಲ್ಲಾ ಕೆಲಸ ಬೇಗ ಬೇಗ ಆಗಬೇಕು. 4 ಜಿ ಜನರೇಷನ್ ಎಲ್ಲಾ ನಮಗೆ ಫಾಸ್ಟಾಗಿ, ಸ್ವಲ್ಪಾನೂ ಬಾಡಿ ಬೆಂಡಾಗದ ಹಾಗೇ ಎಲ್ಲಾನೂ ಕಾಲು ಹತ್ತಿರ ಬಂದು ಬೀಳಬೇಕು ಅನ್ನೋ ಮನಸ್ಥಿತಿಯಿಂದ ಆರೋಗ್ಯದ ಕಡೆ ಗಮನ ಕಡಿಮೆಯಾಗಿ ಹಣ, ಆಸ್ತಿ ಸಂಪಾದನೆಯ ಕಡೆ ಗಮನ ಜಾಸ್ತಿಯಾಗ್ತಾಯಿದೆ.

ಅಂದೊಂದು ಕಾಲದಲ್ಲಿ ಬಟ್ಟೆಯನ್ನ ತಾವೇ ಕೈಯಲ್ಲಿ ಒಗೆದು ಒಣಗಿಸುವ, ಗುಡ್ಡ – ಕಾಡುಗಳಲ್ಲಿ ಅಲೆಮಾರಿಯಂತೆ ಅಲೆದು ಹೊತ್ತಿನ ಊಟಕ್ಕಾಗಿ ಸೌದೆಯನ್ನ ಹೊತ್ತು ತರುವ, ತಮ್ಮ ಕಾಲುಗಳನ್ನೇ ಕಾರಾಗಿಸಿಕೊಂಡು ಮೈಲುಗಟ್ಟಲೆ ಅಲೆದಾಡುವ ಕಾಲದಲ್ಲಿ ನಾವು ಯಾವುದೇ ಆರೋಗ್ಯದ ಸಮಸ್ಯೆಗಳಿಲ್ಲದೇ ಶಕ್ತಿವಂತರಾಗಿದ್ದೆವು. ಈಗ ನಮ್ಮ ಜೀವನ ಶೈಲಿ ತುಂಬಾ ಬದಲಾಗಿದೆ. ಪಕ್ಕದ ಬೀದಿಗೆ ಹೋಗಬೇಕಾದರೂ ಬೈಕ್, ಕಾರುಗಳೇ ಬೇಕು, ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್‍ಗಳೇ ಬೇಕು, ಎಲ್ಲವೂ ಬೇಗ ಬೇಗ ಆಗಬೇಕು. ಈ ಅವಸರದ ಬದುಕಿನಲ್ಲಿ ನಾವು ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಜಾಸ್ತಿ ಎಂದರೆ ತಪ್ಪಾಗಲಾರದು. ಸಂಬಂಧಗಳ ಬೆಸುಗೆ ಮುರಿದು ಸಂಬಧಗಳಿಗೆ ಬೆಲೆಯೇ ಇಲ್ಲದಂತಾಯ್ತು, ಅಜ್ಜ – ಅಜ್ಜಿಯ ಕೈ ತುತ್ತು ಮಾಯವಾಯ್ತು. ಮನೆಯ ಊಟೋಪಚಾರ ದೂರಾಗಿ ಇದೀಗ ಫಾಸ್ಟ್ ಫುಡ್, ರೆಸ್ಟೋರೆಂಟ್‍ಗಳ ಫಿಜ್ಹಾ, ಬರ್ಗರ್, ಜಂಕ್ ಫುಡ್‍ಗಳದ್ದೇ ಹವಾ.

ನಾವು ಕಾಲಿಗೆ ಧರಿಸುವ ಚಪ್ಪಲಿಯಿಂದ ಹಿಡಿದು ತಿನ್ನುವ ಆಹಾರದವರೆಗೂ ಡಿಸ್ಕೌಂಟ್, ಬೈ ಒನ್ ಗೆಟ್ ಒನ್ ಫ್ರೀ, ಎಂಡ್ ಆಫ್ ಸೀಸನ್ ಸೇಲ್..ನಾವು ಡಿಸ್ಕೌಂಟ್, ಡಿಸ್ಕೌಂಟ್ ಎಂದುಕೊಂಡೇ ನಮ್ಮ ಜೀವನದ ಅರ್ಧ ಭಾಗವನ್ನೇ ಔಷಧಿಗಳಿಗೆ ಡಿಸ್ಕೌಂಟಾಗಿ ಬಿಟ್ಟುಬಿಟ್ಟಿದ್ದೇವೆ. ಈ ಡಿಸ್ಕೌಂಟ್‍ಗಳ ಜಂಜಾಟದಲ್ಲಿ ಸಿಲುಕಿ, ಅನಾರೋಗ್ಯಕರ ಆಹಾರವನ್ನು ಬೈ ಮಾಡಿಕೊಂಡು ಕಂಡು ಕೇಳರಿಯದ ರೋಗಗಳನ್ನ ಫ್ರೀಯಾಗಿ ಗೆಟ್ ಮಾಡಿ ಜೀವನಾವಧಿಯ ಅಂತ್ಯದಲ್ಲಿ ಸೇಲ್ ಆಗ್ಬೇಕಾಗಿರೋರು ಸೀಸನ್‍ನ ಎಂಡ್‍ನಲ್ಲೇ ಬರ್ಜರಿಯಾಗಿ ಸೇಲ್ ಆಗ್ತಾಯಿದ್ದೇವೆ.

ಈ ಫಾಸ್ಟ್ ಫುಡ್‍ಗಳ ಸಂತೆಯಲ್ಲಿ ನಾವೂ ಕೂಡ ಫಾಸ್ಟಾಗಿರುವುದರಿಂದ ನಾನಾ ರೀತಿಯ ರೋಗಗಳು ನಮಗೆ ಉಡುಗೊರೆಯಾಗಿ ಬಂದಿವೆ. ಈ ಉಡುಗೊರೆಗಳು ಒಂದಾ…?ಎರಡಾ..? ಬೊಜ್ಜು, ಒತ್ತಡ, ಉಸಿರಾಟದ ಸಮಸ್ಯೆಗಳು ಹೀಗೇ ಹತ್ತು ಹಲವಾರು. ನೀವು ಇದಕ್ಕೆಲ್ಲಾ ಪ್ರತಿನಿತ್ಯ ನಾನಾ ವಿಧದ ಮಾತ್ರೆಗಳನ್ನ, ಔಷಧಿಗಳನ್ನ ತೆಗೆದುಕೊಂಡೇ ಬೇಸತ್ತಿರಬಹುದು. ಆದರೆ ನಾನಿವತ್ತು ನಿಮಗೆ ಔಷಧಿಗಳಿಲ್ಲದ, ವೈದ್ಯರುಗಳಿಲ್ಲದ ಒಂದು ಉತ್ತಮವಾದ, ಪಾರಂಪರಿಕ ಔಷಧಿಯನ್ನ ನಿಮಗೆ ಹೇಳ್ತೇನೆ. ಏನಪ್ಪಾ ಇದು..?ಮೊದಲೇ ಔಷಧಿಗಳಿಂದ ಬಾಡಿ ಬೆಂಡಾಗಿದೆ…ಅದರಲ್ಲಿ ಇದೊಂದು ಬೇರೆ ಹೊಸದು ಎಂದು ಚಿಂತಿಸಬೇಡಿ.

ಇದು ಔಷಧಿಯಲ್ಲದಿದ್ದರೂ ನಿಮ್ಮನ್ನ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರನ್ನಾಗಿಸಿ, ಆರೋಗ್ಯದ ಸಮಸ್ಯೆಗಳಿಗೆ ಬಾಯ್…ಬಾಯ್ ಹೇಳಲು ಸಹಕರಿಸಬಹುದು. ಆಸನಗಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇರಬಹುದು..ಏನಪ್ಪಾ ಇವರು ಮತ್ತೇ ತಲೆಗೆ ಹುಳು ಬಿಡ್ತಿದ್ದಾರಲ್ಲಾ ಅಂದ್ಕೊಳ್ಳಬೇಡಿ. ಆಸನ ಎಂದರೆ ಬೇರಾವ ಆಸನವೂ ಅಲ್ಲಾ ಅದುವೇ ಸನಾತನ ಯೋಗಾಸನಗಳಲ್ಲಿ ಒಂದಾದ, ಅತೀ ಮುಖ್ಯವಾದ ಆಸನ ಸೂರ್ಯ ನಮಸ್ಕಾರ.

ಸೂರ್ಯ ಹಾಗೂ ಚಂದ್ರನ ಪ್ರಭಾವದಿಂದ ಕೂಡ ದೈಹಿಕ ಸ್ಥಿತಿಯಲ್ಲಿ ಬದಲಾವಣೆಯಾಗುತ್ತಿರುತ್ತದೆ. ಸೂರ್ಯ ದೇಹಕ್ಕೆ ಉಷ್ಣದಾಯಕನಾದರೆ, ಚಂದ್ರ ದೇಹಕ್ಕೆ ತಂಪುದಾಯಕನಾಗಿರುತ್ತಾನೆ. ಆರೋಗ್ಯವನ್ನ ಕಾಪಾಡುವಲ್ಲಿ ಸೂರ್ಯದೇವನು ಮಹತ್ತರವಾದ ಪಾತ್ರ ವಹಿಸುತ್ತಾನೆ. ಹಾಗಾಗಿ ಸೂರ್ಯದೇವನಿಗೆ ನಮಿಸುತ್ತ ಪ್ರತಿನಿತ್ಯ ಸೂರ್ಯನಮಸ್ಕಾರವನ್ನು ಮಾಡಿ. ಈ ಸೂರ್ಯನಮಸ್ಕಾರವನ್ನು ಸೂರ್ಯೋದಯದ ಸಮಯದಲ್ಲಿ ಪೂರ್ವ ದಿಕ್ಕಿಗೆ ಮುಖಮಾಡಿ, ಸೂರ್ಯ ದೇವನನ್ನು ನೆನೆಯುತ್ತಾ, ಹಂತ ಹಂತವಾಗಿ ಕ್ರಮಬದ್ಧವಾಗಿ ಮಾಡಬೇಕು. ಸೂರ್ಯನಮಸ್ಕಾರದಲ್ಲಿ ಸುಮಾರು 12 ಹಂತಗಳಿವೆ ಪ್ರತೀ ಹಂತಗಳಲ್ಲಿನ ಆಸನಗಳ ಅಭ್ಯಾಸದಿಂದ ನಮ್ಮ ದೇಹದ ಎಲ್ಲಾ ಭಾಗಗಳಿಗೂ ವಿಭಿನ್ನ ರೀತಿಯ ಉಪಯೋಗವಿದೆ.

ಸೂರ್ಯನಮಸ್ಕಾರದ ಮೊದಲನೇ ಹಂತದ ಆಸನ, ಪ್ರಾರ್ಥನಾಸನ: ಈ ಪ್ರಾರ್ಥನಾಸನವನ್ನು ಮಾಡುವುದರಿಂದ ದೇಹವನ್ನು ಸಮತೋಲನದಲ್ಲಿಡಬಹುದು.

ಸೂರ್ಯನಮಸ್ಕಾರದ ಎರಡನೇ ಹಂತ, ಊಧ್ರ್ವಾಸನ: ಇದೇನಿದು ಊಧ್ರ್ವಾಸನ ಅಂದುಕೊಂಡ್ರಾ..? ಊಧ್ರ್ವಾಸನ ಎನ್ನುವುದು ಸೂರ್ಯನಮಸ್ಕಾರದ ಎರಡನೇ ಹಂತದಲ್ಲಿನ ಆಸನ. ಇದು ಸಮಗ್ರ ಉಸಿರಾಟಕ್ಕೆ ಸಹಕರಿಸುತ್ತದೆ ಮತ್ತು ಎದೆಯ ಭಾಗದಲ್ಲಿನ ಮಾಂಸಖಂಡಗಳನ್ನು ನೇರವಾಗಿಸುತ್ತದೆ.

ನಂತರದ ಆಸನ, ಉತ್ಥಾನಾಸನ: ಇದು ಸೂರ್ಯನಮಸ್ಕಾರದ ಮೂರನೇ ಹಂತದ ಆಸನ. ಉತ್ಥಾನಾಸನ ಮಾಡುವುದರಿಂದ ಏನು ಲಾಭ ಅಂತೀರಾ..? ಇದನ್ನ ಪ್ರತಿನಿತ್ಯ ಮಾಡುವುದರಿಂದ ಜಡ್ಡುಗಟ್ಟಿರುವ ಬೆನ್ನಿನ ಹಾಗೂ ಸೊಂಟದ ಮೂಳೆಯನ್ನ ಮೃದುವಾಗಿಸುತ್ತದೆ ಮತ್ತು ಮಾಂಸಖಂಡಗಳನ್ನು ಬಲಗೊಳಿಸಿ ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ.

ಉತ್ಥಾನಾಸನದ ಮುಂದಿನ ಆಸನ ಏಕಪಾದ ಪ್ರಸರಣಾಸನ: ಈ ಆಸನವನ್ನು ಅಭ್ಯಶಿಸುವುದರಿಂದ ಕಾಲುಗಳ ಮಾಂಸಖಂಡಗಳು ಬಲಗೊಂಡು, ಬೆನ್ನಿನ ಮತ್ತು ಕತ್ತಿನ ಭಾಗದ ಮಾಂಸವನ್ನು ಮೃದುವಾಗಿಸುತ್ತದೆ.

ಏಕಪಾದ ಪ್ರಸರಣಾಸನವನ್ನ ಮಾಡಿದ್ರಿ ಅಲ್ವಾ..? ಈಗ ದ್ವಿಪಾದ ಪ್ರಸರಣಾಸನ: ಅಯ್ಯೋ ದೇವರೇ ನನ್ನ ಬಾಡಿ ಶೇಪೇ ಸರಿಯಿಲ್ವಲ್ಲಾ ಅನ್ನೋರು ಈ ಆಸನದ ಅಭ್ಯಾಸವನ್ನು ಒಮ್ಮೆ ಮಾಡಿ ನೋಡಿ.


ಸೂರ್ಯನಮಸ್ಕಾರದ ಮುಂದಿನ ಹಂತ ಹಾಗೂ ಆರನೇ ಆಸನ ಅಷ್ಟಾಂಗಾಸನ. ಈ ಆಸನದಿಂದ ಬೆನ್ನು ಮೂಳೆ ಹಾಗೂ ಸೊಂಟದ ಮೂಳೆ ಮೃದುವಾಗಿ, ಮಾಂಸಖಂಡಗಳು ಬಲಿಷ್ಟಗೊಳ್ಳುತ್ತದೆ.

ನಂತರದ ಆಸನವನ್ನು ಊಧ್ರ್ವಮುಖ ಶ್ವಾನಾಸನ ಎಂದು ಕರೆಯುತ್ತಾರೆ. ಅಷ್ಟಾಂಗಾಸನದಂತೆಯೇ ಈ ಆಸನವೂ ಸೊಂಟ ಹಾಗೂ ಬೆನ್ನಿನ ಮೂಳೆಯನ್ನು ಮೃದುಗೊಳಿಸುತ್ತದೆ.

ಊಧ್ರ್ವಮುಖ ಶ್ವಾನಾಸನದ ನಂತರದ ಆಸನ ಅಥವಾ ಹಂತ ಅಧೋಮುಖ ಶ್ವಾನಾಸನ. ಊಧ್ರ್ವಮುಖ ಶ್ವಾನಾಸನದಂತೆಯೇ ಈ ಆಸನವೂ ಕೂಡ ಬೆನ್ನು ಹಾಗೂ ಸೊಂಟದ ಸಮಸ್ಯೆಗಳ ನಿವಾರಣೆಗೆ ಸಹಕಾರಿ.

ನಾಲ್ಕನೇ ಹಂತದ ಆಸನವಾದ ಏಕಪಾದ ಪ್ರಸರಣಾಸನವನ್ನೇ ಇಲ್ಲಿ ಪುನರಾವರ್ತಿಸಬೇಕು.

ಸೂರ್ಯನಮಸ್ಕಾರದ ಹತ್ತನೇಯ ಹಂತ ಅಷ್ಟಾಂಗಾಸನ. 

ಸೂರ್ಯನಮಸ್ಕಾರದ ಮುಂದಿನ ಆಸನ ಊಧ್ರ್ವಾಸನ: 

ಸೂರ್ಯನಮಸ್ಕಾರದ ಕೊನೆಯ ಹಂತ ಅಥವಾ ಕೊನೆಯ ಆಸನ ಅಂತ ಹೇಳಿದ್ರೇ ಅದುವೇ ತಾಡಾಸನ ಅಥವಾ ಪ್ರಾರ್ಥನಾಸನ. 

 

ಅಬ್ಬಬ್ಬಾ ಇದೆಷ್ಟು ಹಂತಗಳಿವೆ ಸೂರ್ಯನಮಸ್ಕಾರದಲ್ಲಿ ಅಂತ ಯೋಚನೆ ಮಾಡದತಿದ್ದೀರಾ..? ಆರೋಗ್ಯಕರ ಜೀವನ ಶೈಲಿ ನಮ್ಮದಾಗಬೇಕಾದರೆ ಸ್ವಲ್ಪಾನೂ ಕಷ್ಟ ತೆಗೆದುಕೊಳ್ಳದೇ ಇದ್ರೆ ಹೇಗೇ ಅಲ್ವಾ..? ಕೈ ಕೆಸರಾದರೆ ತಾನೇ ಬಾಯಿ ಮೊಸರಾಗೋದು. ಈ 12 ಹಂತಗಳಿರುವ ಆಸನವನ್ನ ಖಾಲಿ ಹೊಟ್ಟೆಯಲ್ಲಿ ಸೂರ್ಯೋದಯದ ಸಮಯದಲ್ಲೇ ಮಾಡಬೇಕು ಅಂದೇನಿಲ್ಲ, ಸೂರ್ಯಾಸ್ತದ ಸಮಯದಲ್ಲೂ ಕೂಡ ಮಾಡಬಹುದು. ಹೃದಯ ಸಂಬಂಧಿ ಸಮಸ್ಯೆ, ಮಂಡಿನೋವು, ಕತ್ತಿನ ಸಮಸ್ಯೆ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ತಜ್ಞರ ಸಲಹೆಯ ಮೇರೆಗೆ ಸೂರ್ಯನಮಸ್ಕಾರವನ್ನು ಅಭ್ಯಶಿಸಿ.

Ayush TV

Ayush Tv- World's First Health, Wellness, Lifestyle and Infotainment Channel